ಕಲಬುರ್ಗಿಯಲ್ಲಿ ಇನ್ನೂ 11 ಜನರಿಗೆ ಕೊರೋನಾ ಸೋಂಕು

ಕಲಬುರ್ಗಿ
ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾದಲ್ಲಿ ಏರುಪೇರು ಕಂಡುಬರುತ್ತಿದ್ದು, ಬುಧವಾರ ಜಿಲ್ಲೆಯಲ್ಲಿ ಮತ್ತೆ ಹನ್ನೊಂದು ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಅಲ್ಲದೇ ಮಹತ್ವದ ಬೆಳವಣಿಗೆಯಲ್ಲಿ 66 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಶರತ್ ಬಿ., ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆಯ ಹತ್ತು ಜನ ಹಾಗೂ ದೆಹಲಿ ಪ್ರವಾಸದ ಹಿನ್ನೆಲೆಯ ಓರ್ವ ಯುವತಿ ಸೇರಿದಂತೆ ಹನ್ನೊಂದು ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಕಾಳಗಿ ಪಟ್ಟಣದ ಐದು ವರ್ಷದ ಬಾಲಕಿ, 13 ವರ್ಷದ ಬಾಲಕಿ, ಕಲಬುರ್ಗಿಯ ಬಾಪುನಗರದ 35 ವರ್ಷದ ಯುವಕ, ಆಶ್ರಯ ಕಾಲೋನಿಯ ಸುಲ್ತಾನಪೂರ್ ರಸ್ತೆ ಪ್ರದೇಶದ 15 ವರ್ಷದ ಬಾಲಕಿ, 23 ವರ್ಷದ ಯುವತಿ, ಚಿಂಚೋಳಿ ತಾಲ್ಲೂಕಿನ ಲಚ್ಚುನಾಯಕ್ ತಾಂಡಾದ ಏಳು ವರ್ಷದ ಬಾಲಕ, 35 ವರ್ಷದ ಯುವಕ, ಯಡ್ರಾಮಿಯ 13 ವರ್ಷದ ಬಾಲಕ, ಕಲಬುರ್ಗಿ ತಾಲ್ಲೂಕಿನ ಬಬಲಾದ್​ನ ಏಳು ವರ್ಷದ ಬಾಲಕ, ಅಫಜಲಪೂರ್ ತಾಲ್ಲೂಕಿನ ಮದರಾ(ಬಿ) ಗ್ರಾಮದ 25 ವರ್ಷದ ಯುವತಿಗೆ ಕೊರೋನಾ ಸೋಂಕು ತಗುಲಿದೆ ಎಂದು ಅವರು ವಿವರಿಸಿದ್ದಾರೆ.
ಅಲ್ಲದೇ ನವದೆಹಲಿಯ ಪ್ರವಾಸ ಹಿನ್ನೆಲೆಯ ಕಲಬುರ್ಗಿಯ ಗಣೇಶನಗರದ ಬಳಿಯ ಬಾರೆಹಿಲ್ಸ್​ ಪ್ರದೇಶದ 24 ವರ್ಷದ ಯುವತಿ ಕೋವಿಡ್​19 ಸೋಂಕು ಅಂಟಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
66 ಜನರು ಗುಣಮುಖ: ಜಿಲ್ಲೆಯ ಒಟ್ಟು 66 ಜನರು ಕೊರೋನಾ ಪೀಡಿತರು ಕೋವಿಡ್​19 ಸೋಂಕಿನಿಂದ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ., ಅವರು ಪ್ರಕಟಿಸಿದ್ದಾರೆ.
ನಗರದಲ್ಲಿ ಇಬ್ಬರು, ಕಲಬುರ್ಗಿ ತಾಲ್ಲೂಕಿನ ಇಬ್ಬರು, ಚಿತ್ತಾಪೂರ್ ತಾಲ್ಲೂಕಿನ 29, ಕಾಳಗಿ ತಾಲ್ಲೂಕಿನ ನಾಲ್ವರು, ಸೇಡಂ ತಾಲ್ಲೂಕಿನ 13 ಜನರು, ಚಿಂಚೋಳಿ ತಾಲ್ಲೂಕಿನ ನಾಲ್ವರು, ಆಳಂದ್ ತಾಲ್ಲೂಕಿನ 10 ಜನರು, ಅಫಜಲಪೂರ್ ಮತ್ತು ಕಮಲಾಪೂರ್ ತಾಲ್ಲೂಕಿನ ತಲಾ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತ 780 ಜನರಲ್ಲಿ 279 ಜನರು ಗುಣಮುಖರಾಗಿದ್ದಾರೆ. 8 ಜನರು ಅಸುನೀಗಿದ್ದು, 493 ಸಕ್ರೀಯ ರೋಗಿಗಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಚಿತ್ರಶೀರ್ಷಿಕೆಃ 10ಜಿಎಲ್​ಬಿ19

Leave a Reply

Your email address will not be published. Required fields are marked *